Saturday, August 18, 2012

ಸಾವು, ಕರೆಯದೇ ಬರುವ ಅತಿಥಿ


                          ಸಾವು, ಕರೆಯದೇ ಬರುವ ಅತಿಥಿ

ಅದೊಂದು ಶನಿ, ಅದಕ್ಕೊಂದು ಶಿಸ್ತಿಲ್ಲ. ನಿಯತ್ತಿಲ್ಲ. ಕರುಣೆಯಿಲ್ಲ. ದಯೆ-ದಾಕ್ಷಿಣ್ಯವಿಲ್ಲ. ಬಡವ-ಬಲ್ಲಿದರೆಂಬ ಬೇಧವಿಲ್ಲ. ಖದೀಮರನ್ನು ಕಂಡರೆ ಹೆದರಿಕೆಯಿಲ್ಲ. ಮಕ್ಕಳನ್ನು ಕಂಡರೆ ವಿಶೇಷ ಪ್ರೀತಿಯೂ ಇಲ್ಲ. ರೋಗಿಗಳ ಮೇಲೆ ಅದಕ್ಕೆ ಅನುಕಂಪವಿಲ್ಲ. ನಿರ್ಗತಿಕರ ಬಗ್ಗೆ ವಿಶೇಷ ಒಲವೂ ಇಲ್ಲ. ಶ್ರೀಮಂತರೊಂದಿಗೆ ಅದು ಚೌಕಾಸಿಗೆ ನಿಲ್ಲುವುದಿಲ್ಲ. ಪಾಪ, ಬಡವ ಎಂದು ಬಿಟ್ಟು ಹೋಗುವುದೂ ಇಲ್ಲ. ಮನುಷ್ಯರ ಕಥೆ ಹಾಗಿರಲಿ, ಮೂಕ ಪ್ರಾಣಿಗಳ ವಿಷಯದಲ್ಲಾದರೂ ಈ ಶನಿ ಮುಂಡೇದು ರಿಯಾಯಿತಿ ತೋರುವುದಿಲ್ಲ. ಬದಲಿಗೆ, ಯಾವುದೋ ಕಳ್ಳ ಹೊತ್ತಿನಲ್ಲಿ ಬಂದು ತನಗೆ ಬೇಕಾದವರನ್ನು ಕರೆದುಕೊಂಡು ಹೋಗಿಯೇಬಿಡುತ್ತದೆ. ಹೀಗೆ, ಹೇಳದೇ ಕೇಳದೆ ಬಂದು ಹೋಗುವ ಅನಿರೀಕ್ಷಿತ ಅತಿಥಿಯ ಹೆಸರೇ-ಸಾವು!
ಸ್ವಾರಸ್ಯವೆಂದರೆ, ಸಾವಿರ ಸಂಕಟಗಳ ನಡುವೆ ಉಳಿದವರು ಕೂಡ ಸಾಯಲು ಇಚ್ಛಿಸುವುದಿಲ್ಲ. ತುಂಬ ದುಃಖವಾದಾಗ, ಬೇಸರವಾದಾಗ, ಸಾಲ ಜತೆಯಾದಾಗ, ನೌಕರಿ ಹೋದಾಗ, ಮೇಲಿಂದ ಮೇಲೆ ಅವಮಾನಗಳಾದಾಗ, ಮೈ ಎಂಬುದು ರೋಗಗಳ ಗೂಡಾದಾಗ- `ಹೀಗೆ ಒದ್ದಾಡುವ ಬದಲು ಛಕ್ಕಂತ ಸತ್ತು ಹೋದ್ರೆ ಸಾಕಪ್ಪಾ ಅನ್ನಿಸ್ತಿದೆ' ಎಂದಿರುತ್ತಾರೆ ನಿಜ. ಆದರೆ, ಅದು ಎದೆಯಾಳದ ಮಾತಾಗಿರುವುದಿಲ್ಲ. ಸಂಕಟದಿಂದ ಸಾವನ್ನು ಧ್ಯಾನಿಸುವ ಮಂದಿ ಕೂಡ, ಈಗಲೋ ಇನ್ನೊಂದು ಕ್ಷಣದಲ್ಲೋ ನನಗೆ ಒಳ್ಳೆಯದಾಗಿಬಿಡುತ್ತೆ ಎಂದು ಕೊಳ್ಳುತ್ತಾರೆ. ಇಲ್ಲಿಯವರೆಗೆ ನಾನು ಯಾರಿಗೂ ಕೆಟ್ಟದು ಮಾಡಿಲ್ಲವಲ್ಲ? ದೇವರಿಗೆ ಪೂಜೆ ಮಾಡುವುದನ್ನು ಮರೆತಿಲ್ಲವಲ್ಲ? ಐದಾರು ಜನಕ್ಕೆ ಸಹಾಯ ಮಾಡಿದ್ದೀನಲ್ಲ? ಈ ಒಳ್ಳೆಯತನವೇ (?!) ನನ್ನನ್ನು ಕಾಪಾಡುತ್ತದೆ ಎಂದು ಬಲವಾಗಿ ನಂಬಿರುತ್ತಾರೆ.
ಹಾಗಾಗಿ, ಯಾರೆಂದರೆ ಯಾರೂ ಸಾವು ಬಯಸುವುದಿಲ್ಲ. ಅದನ್ನು ಆಹ್ವಾನಿಸುವುದಿಲ್ಲ. ಅಕಸ್ಮಾತ್ ಕನಸುಬಿದ್ದರೆ, ಸರಹೊತ್ತಿನಲ್ಲೇ ದಡಬಡಿಸಿ ಎದ್ದು ಡಗ್ಗಡಗ್ಗ ಹೊಡೆದುಕೊಳ್ಳುವ ಹೃದಯಬಡಿತ ಕೇಳಿಸಿಕೊಂಡು, ಕಣ್ಣುಜ್ಜಿಕೊಳ್ಳುತ್ತಾರೆ. ಅಂಥ ಯಾವ ಅನಾಹುತವೂ ನಡೆದಿಲ್ಲ ಎಂದು ಎರಡೆರಡು ಬಾರಿ ಖಚಿತಪಡಿಸಿಕೊಳ್ಳುತ್ತಾರೆ. ನಂತರ ಆ ಅಪರಾತ್ರಿಯಲ್ಲೇ ದೇವರ ಮುಂದೆ ನಿಂತು ಕೆನ್ನೆ ಕೆನ್ನೆ ಬಡಿದುಕೊಂಡು- `ಏನೂ ತೊಂದರೆ ಯಾಗದಿರಲಿ ಭಗವಂತಾ' ಎಂದು ಪ್ರಾರ್ಥಿಸುತ್ತಾರೆ. ಅಕಸ್ಮಾತ್ ಬೆಳಗಿನ ಜಾವದಲ್ಲೇ ಯಾರೋ ಸತ್ತು ಹೋದಂತೆ ಕನಸು ಬಿದ್ದರಂತೂ ಮುಗಿದೇ ಹೋಯಿತು. ತಕ್ಷಣವೇ ಪುರೋಹಿತರ ಬಳಿ ಹೋಗಿ, ಮನೆಯ ಪುರಾಣವನ್ನೂ, ಕೆಟ್ಟ ಕನಸು ಬಿದ್ದ ಸಂಗತಿಯನ್ನೂ ಸಾದ್ಯಂತವಾಗಿ ವಿವರಿಸುತ್ತಾರೆ. ಕವಡೆ ಬಿಡುತ್ತಾರೆ. ಅಂಗೈ ತೋರಿಸಿ ಶಾಸ್ತ್ರ ಕೇಳುತ್ತಾರೆ. ಗಡಿಬಿಡಿಯಿಂದಲೇ ದೇವಸ್ಥಾನಕ್ಕೆ ನುಗ್ಗುತ್ತಾರೆ. ಅರ್ಚನೆ ಮಾಡಿಸುತ್ತಾರೆ. ಹರಕೆ ಕಟ್ಟಿಕೊಳ್ಳುತ್ತಾರೆ. ನಂತರ- `ಆ ಶನಿ ಮುಂಡೇದು ಬರದೇ ಇದ್ದರೆ ಸಾಕಪ್ಪಾ' ಎಂದುಕೊಂಡೇ ಬಾಕಿ ಉಳಿದ ಕೆಲಸಗಳತ್ತ ತಿರುಗಿ ನೋಡುತ್ತಾರೆ.
ಸ್ವಾರಸ್ಯವೆಂದರೆ, ಯಾರೂ ಕರೆಯದಿದ್ದರೂ ಈ ಸಾವೆಂಬ ಅತಿಥಿ ಬಂದೇ ಬರುತ್ತದೆ. ಸಣ್ಣದೊಂದು ಮುನ್ಸೂಚನೆಯನ್ನೂ ಕೊಡದೆ ಬರುತ್ತದೆ. ಅದು ಕಾಲಾತೀತ, ಪಕ್ಷಾತೀತ ಮತ್ತು ಜಾತ್ಯಾತೀತ. ಸಾವಿನ, ಅರ್ಥಾತ್ ಕಾಲರಾಯನ ಕಾಕದೃಷ್ಟಿ ಬಿದ್ದವನನ್ನು ಭಗವಂತನೂ ಕಾಪಾಡಲಾರ!
ಸಾವಿರ ಮಂದಿಯ ಪ್ರಾರ್ಥನೆ, ನೂರು ದೇವರುಗಳ ಆಶೀರ್ವಾದ, ಕೋಟ್ಯಂತರ ಮಂದಿಯ ಪ್ರೀತಿ, ಒಳ್ಳೆಯದನ್ನು ಮಾತ್ರ ಬಯಸುವ ಮನಸ್ಸು, ಹೊಂದಿರುವ ಮನುಷ್ಯ ಸಾವನ್ನೂ ಜಯಿಸಬಲ್ಲ ಎಂದು ಅವರಿವರು ಹೇಳುವುದುಂಟು. ಅದೇ ನಿಜವಾಗಿದ್ದರೆ, ಆಂಧ್ರಪ್ರದೇಶದ ಮುಖ್ಯಮಂತ್ರಿವೈ.ಎಸ್.ಆರ್. ರೆಡ್ಡಿ ಅಂಥ ದುರ್ಮಣರಣಕ್ಕೆ ಈಡಾಗುತ್ತಿರಲಿಲ್ಲ. ಕನ್ನಡಿಗರ ಕಣ್ಮಣಿ ಡಾ. ರಾಜ್‌ಕುಮಾರ್‌ಗೆ ದಿಢೀರ್ ಹೃದಯಾಘಾತವಾಗುತ್ತಿರಲಿಲ್ಲ. ಎಲ್‌ಟಿಟಿಇ ನಾಯಕ ಪ್ರಭಾಕರನ್, ಅಬ್ಬೇಪಾರಿಯಂತೆ ಸಾಯುತ್ತಿರಲಿಲ್ಲ. ಸದ್ದಾಂ ಹುಸೇನ್ ಎಂಬ ಸರ್ವಾಧಿಕಾರಿಯ ಕೊರಳಿಗೆ ಹಗ್ಗ ಬೀಳುತ್ತಿರಲಿಲ್ಲ. ಸ್ವಾಮಿ ವಿವೇಕಾನಂದರಂಥ ಮಹಾಪುರುಷರು ಚಿಕ್ಕ ವಯಸ್ಸಿಗೇ ಕಣ್ಮರೆಯಾಗುತ್ತಿರಲಿಲ್ಲ. ನೇತಾಜಿಯಂಥ ಅಪ್ರತಿಮ ನಾಯಕ ವಿಮಾನದೊಂದಿಗೆ ಮಾಯವಾಗುತ್ತಿರಲಿಲ್ಲ ಮತ್ತು ಶಂಕರ್‌ನಾಗ್ ಎಂಬ `ಎಂದೂ ಮಾಸದ ನಗೆಗೆ' ಅಪಘಾತವಾಗುತ್ತಲೂ ಇರಲಿಲ್ಲ.
ಆದರೆ, ಸಾವೆಂಬುದು ನಿರ್ದಯಿ. ಒಳ್ಳೆಯವರು ಒಂದಷ್ಟು ಜಾಸ್ತಿ ದಿನ ಬದುಕಿರಲಿ. ಕೇಡಿಗರು ಮಾತ್ರ ಬೇಗನೇ ಬರಲಿ ಎಂದು ಅದು ಎಂದೂ ಯೋಚಿಸುವುದಿಲ್ಲ. ಒಂದು ಮಗುವಿನ ಜೀವ ಹೊತ್ತೊಯ್ದರೆ, ತಾಯಿ ಅನ್ನಿಸಿಕೊಂಡವಳಿಗೆ ಎಷ್ಟು ಸಂಕಟವಾಗಬಹುದು? ಮೂರು ತಿಂಗಳ ಹಿಂದಷ್ಟೇ ಮದುವೆಯಾದ ಹುಡುಗನ ಉಸಿರು ನಿಲ್ಲಿಸಿದರೆ ಅವನ ಹೆಂಡತಿಯ ಬದುಕು ಏನಾಗಬಹುದು? ಪ್ರಾಯಕ್ಕೆ ಬಂದ ಮಕ್ಕಳು ಕಣ್ಮುಂದೆಯೇ ಸತ್ತುಹೋದಾಗ ತಂದೆಯಾದವನ ಮನಸ್ಸಿಗೆ ಅದೆಷ್ಟು ಘಾಸಿಯಾಗಬಹುದು? ಬದುಕಿಡೀ ಒಂದು ಇರುವೆಯನ್ನೂ ಕೊಲ್ಲದಂಥ ಸಜ್ಜನನೊಬ್ಬ ಲಾರಿಯ ಚಕ್ರಕ್ಕೆ ಸಿಕ್ಕಿಕೊಂಡು ಅಪ್ಪಚ್ಚಿಯಾದಾಗ ಅವನ ಬಂಧುಗಳು ಹೇಗೆ ರೋಧಿಸಬಹುದು? ತನ್ನ ಯಶಸ್ಸು ಕಂಡು ಖುಷಿಯಾದ ತಂದೆಗೆ ಮರುಕ್ಷಣವೇ ಹೃದಯಾಘಾತವಾದ ಮಗನ ಗೋಳು, ನಂತರದ ಬಾಳು ಹೇಗಿರ ಬಹುದು? ಒಂದೇ ಕುಟುಂಬದ ಹತ್ತು ಮಂದಿ ದೇವಸ್ಥಾನದಿಂದ ಹಿಂದಿರುಗುವಾಗ ಅಪಘಾತದಲ್ಲಿ ಸತ್ತರೆ ಬದುಕಿಗೆ ಯಾವ ಅರ್ಥವಿದೆ? ಉಹುಂ, ಇಂಥ ಯಾವ ಪ್ರಶ್ನೆಗಳನ್ನೂ ಸಾವೆಂಬ ಸಾವು ಕೇಳಿಸಿಕೊಳ್ಳುವುದಿಲ್ಲ. ಜನರೋ, ಜನುವಾರುಗಳೋ ತಾವಾಗಿಯೇ ನನ್ನನ್ನು ಕರೆಯಲಿ ಎಂದು ಬಯಸುವುದಿಲ್ಲ. ಕರೆಯದೇ ಹೋದರೆ ಕೆರದಲ್ಲಿ ಹೊಡೆದಾರು ಎಂದು ಹೆದರುವುದೂ ಇಲ್ಲ! ಯಾರೋ ಒಂದಿಬ್ಬರು ಒಳ್ಳೆಯ ಕೆಲಸಕ್ಕೆ ನಿಂತಿದ್ದರೆ ಅದು ಮುಗಿಯಲಿ ಎಂದು ಕಾಯುವುದಿಲ್ಲ. ಇಂಥ ಒಳ್ಳೆಯ ಕೆಲಸಗಳಿಗೆಂದೇ ಇವರು ಬದುಕಲಿ ಎಂದು ಗ್ರೇಸ್ ಕೊಡುವುದೂ ಇಲ್ಲ. ಹೋಗಲಿ; ಕೆಲವೇ ಕೆಲವು ಮಂದಿಗೆ-ವಿಐಪಿಗಳು ಅನ್ನಿಸಿಕೊಂಡವರಿಗಾದರೂ `ಇಂಥ ದಿನ, ಇಷ್ಟು ಗಂಟೆಗೆ ಸರಿಯಾಗಿ ಬರ್‍ತೇನೆ. ರೆಡಿಯಾಗಿರಿ' ಎಂದು ಮುನ್ಸೂಚನೆಯನ್ನೂ ಕೊಡುವುದಿಲ್ಲ. ಬದಲಿಗೆ, ತನಗೆ ಇಷ್ಟ ಬಂದ ಹೊತ್ತಿನಲ್ಲಿ ಬರುತ್ತದೆ. ತನಗೆ ಬೇಕೆನ್ನಿಸಿದ ರೂಪದಲ್ಲಿ ಬರುತ್ತದೆ!
ಹೌದಲ್ಲವಾ? ಸಾವೆಂಬುದು ಸೈಕಲ್, ಸ್ಕೂಟರ್, ಕಾರು, ಬಸ್, ರೈಲು, ವಿಮಾನ ಅಪಘಾತದ ರೂಪದಲ್ಲಿ ಬರಬಹುದು. ಜ್ವರದ ನೆಪದಲ್ಲಿ ಬರಬಹುದು. ಹೃದಯಾಘಾತದ ಕಾರಣ ಹೇಳಬಹುದು.ಅದು ಮನಸ್ಸು ಮಾಡಿದರೆ ಕಳ್ಳರ ವೇಷದಲ್ಲೇ ಬರಬಹುದು. ಕುದುರೆಯ ಕಾರಣದಿಂದಲೂ ಬರಬಹುದು. ಅಷ್ಟೇ ಅಲ್ಲ, ಸಾವೆಂಬುದು ವೈದ್ಯರ ರೂಪದಲ್ಲೇ ಬಂದು, ಹಲೋ ಹೇಳಿ ಉಸಿರು ನಿಲ್ಲಿಸಬಹುದು!
* * *
ಎಲ್ಲರನ್ನೂ ಹೆದರಿಸುವ, ದೇವರನ್ನೇ ಅಣಕಿಸುವ, ನಂಬಿಕೆಗಳನ್ನೇ ಬುಡಮೇಲು ಮಾಡುವ ಈ ಸಾವೆಂಬೋ ಸಾವು ಒಂದು ವೇಳೆ ಮೊದಲೇ ಮುನ್ಸೂಚನೆ ನೀಡಿ ಬಂದಿದ್ದರೆ ಬದುಕು ಹೇಗಿರುತ್ತಿತ್ತು? ನಾನು ಇಂಥ ದಿನವೇ ಇದೇ ರೀತಿಯಲ್ಲಿ ಸಾಯುತ್ತೇನೆ ಎಂದು ಗೊತ್ತಿದ್ದಿದ್ದರೆ ಜನ ಹೇಗೆ ರಿಯಾಕ್ಟ್ ಮಾಡುತ್ತಿದ್ದರು? ಈ ಕುತೂಹಲದ ಪ್ರಶ್ನೆಗಳಿಗೆ ಹೀಗೆ ಉತ್ತರಿಸಬಹುದೇನೋ: ಸಾವು ಹೀಗೇ ಬರುತ್ತೆ ಎಂದು ಗೊತ್ತಿದ್ದಿದ್ದರೆ- ವೈ.ಎಸ್. ರಾಜಶೇಖರ ರೆಡ್ಡಿ ಮೊನ್ನೆ ಹೆಲಿಕ್ಯಾಪ್ಟರ್ ಹತ್ತುತ್ತಿರಲಿಲ್ಲ. ಎಲ್‌ಟಿಟಿಇ ನಾಯಕ ಪ್ರಭಾಕರನ್, ಸೇನೆಯೊಂದಿಗೆ ಸೆಣಸುವ ರಿಸ್ಕು ತಗೊಳ್ತಿರಲಿಲ್ಲ. ಮೈಕಲ್ ಜಾಕ್ಸನ್- ಮಾದಕ ದ್ರವ್ಯದ ಹಿಂದೆ ಬೀಳುತ್ತಿರಲಿಲ್ಲ. ಸುಂದರಿ ಡಯಾನ ಕಾರು ಹತ್ತುತ್ತಿರಲಿಲ್ಲ. ವೀರಪ್ಪನ್, ಕಾಡು ಬಿಟ್ಟು ಹೊರಗೇ ಬರುತ್ತಿರಲಿಲ್ಲ. ಇಂದಿರಾಗಾಂಧಿಯ ಬೆನ್ನಿಗೆ ಅಂಗರಕ್ಷಕರಿರುತ್ತಿರಲಿಲ್ಲ. ಅಮಾಯಕಿಯೊಬ್ಬಳ ಹೂಮಾಲೆಗೆ ರಾಜೀವ್‌ಗಾಂಧಿ ಕೊರಳೊಡ್ಡುತ್ತಿರಲಿಲ್ಲ. ಸಂಜಯಗಾಂಧಿ ವಿಮಾನ ಹತ್ತುತ್ತಿರಲಿಲ್ಲ. ಅಷ್ಟೇ ಅಲ್ಲ, ಮಗಳು ಕಾಂಚನಾ ಕೊಳವೆ ಬಾವಿಗೆ ಬೀಳುತ್ತಾಳೆ ಎಂದು ಮೊದಲೇ ಗೊತ್ತಿದ್ದಿದ್ದರೆ ಬಿಜಾಪುರದ ಆ ತಂದೆ, ತಾಯಿ, ಅವಳನ್ನು ರಸ್ತೆಗೆ ಬಿಡುತ್ತಲೂ ಇರಲಿಲ್ಲ. ಸಾವೆಂಬುದು ಇಂಥ ದಿನವೇ ಬರಲಿದೆ ಎಂದು ಗೊತ್ತಿದ್ದರೆ ಬಹುಶಃ ನಮ್ಮ ಅಣ್ಣಾವ್ರು `ಇದೇ ಕಡೆ' ಎಂದುಕೊಂಡು ಒಂದು ಅಪರೂಪದ ಸಿನಿಮಾ ಕೊಟ್ಟಿರ್‍ತಾ ಇರ್‍ತಿದ್ರು. ಹಾಗೆಯೇ, ನನ್ನ ನಂತರ ನೆನಪಿಗಿರಲಿ ಎಂಬ ಸದಾಶಯದಿಂದ ಹತ್ತಿಪ್ಪತ್ತು ಚಿತ್ರಕಥೆಗಳನ್ನು ಬರೆದಿಟ್ಟ ನಂತರವೇ ಶಂಕರ್‌ನಾಗ್ ಕಾರು ಹತ್ತಿರುತ್ತಿದ್ದರು. ಆದರೆ ಒಬ್ಬ ಗಾಂಧೀಜಿ ಮಾತ್ರ ಸಾವೆಂಬುದು ನಾಥೂರಾಂ ಗೋಡ್ಸೆಯ ರೂಪದಲ್ಲೇ ಬರುತ್ತದೆ ಎಂದು ತಿಳಿದ ನಂತರವೂ ಏನೆಂದರೆ ಏನೂ ಬದಲಾಗುತ್ತಿರಲಿಲ್ಲ! ಬದಲಿಗೆ ನಾಳೆ ಬರುವುದು ನನಗಿಂದೇ ಬರಲಿ ಎಂದುಕೊಂಡು ತಾವಾಗಿಯೇ ಗೋಡ್ಸೆಯ ಮನೆ ಹುಡುಕಿಕೊಂಡು ಹೋಗಿಬಿಡುತ್ತಿದ್ದರು!
ಇದೆಲ್ಲ, ಈಗ ನಮ್ಮೊಂದಿಗೆ ಇಲ್ಲದವರನ್ನು, ಕಥೆಯಾಗಿ ಹೋದವರನ್ನು ಕುರಿತ ಮಾತಾಯಿತು. ಒಂದು ವೇಳೆ, ನಾವು ಇಂಥ ದಿನವೇ ಸಾಯುತ್ತೇವೆ ಎಂದು ನಮಗೆಲ್ಲ ಮೊದಲೇ ಗೊತ್ತಾಗಿ ಹೋಗಿದ್ದರೆ ಬದುಕು ಹೇಗಿರುತ್ತಿತ್ತು? ಈ ಪ್ರಶ್ನೆಗೆ ಒಂದು ಅಂದಾಜಿನ ಉತ್ತರಗಳನ್ನು ಪಟ್ಟಿ ಮಾಡಿದರೆ, ಮೊದಲಿಗೆ ಖುಷಿಯಾಗುತ್ತದೆ ನಿಜ. ಮರುಕ್ಷಣವೇ ಭಯವಾಗುತ್ತದೆ. ಏಕೆಂದರೆ, ತಾನು ಇಂಥ ದಿನವೇ, ಹೀಗೇ ಸಾಯುತ್ತೇನೆ ಎಂದು ಮನುಷ್ಯನಿಗೆ ಗೊತ್ತಾಗಿ ಹೋಗಿದ್ದರೆ- ಅವನಿಗೆ ಸಾವಿನ ಭಯವೇ ಇರುತ್ತಿರಲಿಲ್ಲ. ದೇವರಿಗಾಗಲಿ, ಜ್ಯೋತಿಷಿಗಳಿಗಾಗಲಿ, ವೈದ್ಯರಿಗಾಗಲಿ ಡಿಮ್ಯಾಂಡೇ ಇರುತ್ತಿರಲಿಲ್ಲ. ಬದುಕಿನಲ್ಲಿ ಥ್ರಿಲ್ ಇರುತ್ತಿರಲಿಲ್ಲ. ಕನಸುಗಳಿಗೆ ಅರ್ಥವಿರುತ್ತಿರಲಿಲ್ಲ. ಎಲ್ಲರೂ ಒಳ್ಳೆಯ ಸಾವನ್ನೇ ಬಯಸುತ್ತಿದ್ದರು. ಸಾವಿಗೆ ಬೇಕಾದ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಕೆಟ್ಟ ಬುದ್ಧಿಯ ಜನ, ಹೇಗಿದ್ರೂ ನಾಳೆ ಸಾಯೋದು ಗ್ಯಾರಂಟಿ, ಹಾಗಾಗಿ ಇನ್ನೊಂದಷ್ಟು ಕ್ರೈಮು ಮಾಡಿಯೇ ಸಾಯೋಣ ಎಂದು ನಿಂತುಬಿಡ್ತಿದ್ರು. ಕಾರ್ ಅಪಘಾತದಲ್ಲಿ ಸಾಯ್ತೀನಿ ಅಂತೇನಾದ್ರೂ ಗೊತ್ತಿದ್ದಿದ್ರೆ ಆತ ಬಸ್ಸಿನಲ್ಲೇ ಪ್ರಯಾಣಿಸುತ್ತಿದ್ದ. ನೀರಿಂದ ಸಾವು ಅನ್ನೋದು ಗೊತ್ತಿದ್ದವ ಮಳೆ ಹನಿಗೆ ಕೂಡ ಮುಖ ಒಡ್ಡುತ್ತಿರಲಿಲ್ಲ. ಎಲ್ಲರೂ ಕಡೆಯ ದಿನಗಳನ್ನು ತಮ್ಮ ಇಷ್ಟದಂತೆ ಬದುಕಲು ಪ್ಲಾನ್ ಮಾಡ್ತಾ ಇರ್‍ತಿದ್ರು. ಆಸೆಬುರುಕರು ಮಾತ್ರ ಬ್ಯಾಂಕುಗಳಿಗೆ, ಎಲ್ಲೈಸಿ ಕಂಪನಿಗಳಿಗೆ, ಗೆಳೆಯರಿಗೆ, ಬಂಧುಗಳಿಗೆ ಸುಳ್ಳು ಸುಳ್ಳೇ ನಂಬಿಸಿ ಅಪಾರ ಮೊತ್ತದ ಸಾಲ ಪಡೆದು, ಭಾರೀ ಮೊತ್ತಕ್ಕೆ ವಿಮೆ ಮಾಡಿಸಿ ಎಲ್ಲರಿಗೂ ತಿರುಪತಿ ನಾಮ ಹಾಕಿ ಹೋಗಿಬಿಡ್ತಿದ್ರು.
ಅಷ್ಟೇ ಅಲ್ಲ, ನಾನು ಇಂಥ ದಿನವೇ ಸಾಯ್ತೀನಿ ಎಂದು ಮೊದಲೇ ಗೊತ್ತಿದ್ದಿದ್ದರೆ- `ನಾಳೆ ಬಾ' ಎಂಬ ಬರಹ ಎಲ್ಲ ಮನೆಯ ಬಾಗಿಲ ಮೇಲೂ ಕಡ್ಡಾಯವಾಗಿರುತ್ತಿತ್ತು. ಸಾಯುವ ದಿನ ಇನ್ನೂ ಎರಡು ವರ್ಷ ಬಾಕಿಯಿರುವಾಗಲೇ ಎಂಥವರಿಗೂ ಚಿಂತೆ ಶುರುವಾಗಿಬಿಡ್ತಿತ್ತು. ಸಾಹಿತಿ-ಕಲಾವಿದರುಗಳಂತೂ ತಮಗೆ ಸೂಕ್ತ ಸ್ಥಾನಮಾನ, ಪ್ರಶಸ್ತಿ ಬರಲಿಲ್ಲ ಎಂಬುದನ್ನೇ ಮುಂದಿಟ್ಟುಕೊಂಡು ಲಾಬಿಗೆ ಮುಂದಾಗುತ್ತಿದ್ದರು. ಪರಮಾಪ್ತರ ಮುಂದೆ ನಿಂತು- `ನಿಮ್ಮಲ್ಲಿ ಸುದ್ದಿ ಮುಚ್ಚಿಟ್ಟು ಲಾಭವೇನಿದೆ? ನಾನು ಇಂಥ ದಿನವೇ ಸಾಯ್ತೀನಿ. ಅಷ್ಟರೊಳಗೆ ಒಂದು ಪ್ರಶಸ್ತಿ ಕೊಡಿಸ್ರೀ. ನೆಮ್ಮದಿ ಯಾಗಿ ಸಾಯೋಕೆ ಅವಕಾಶ ಮಾಡಿಕೊಡ್ರೀ' ಎಂದು ಅಂಗಲಾಚುತ್ತಿದ್ದರು. ರಾಜಕಾರಣಿಗಳಂತೂ ಸಾಯೋದ್ರೊಳಗೆ ನಾನು ಮಂತ್ರಿಯಾಗಬೇಕೂ... ಎಂದು ರಚ್ಚೆ ಹಿಡಿದು ಕೂತುಬಿಡುತ್ತಿದ್ದರು. ತಮಾಷೆ ಕೇಳಿ: ಆ ಸಂದರ್ಭದಲ್ಲಿ ಕೂಡ ಪರ-ವಿರೋಧವಾಗಿ ಗಲಾಟೆಗಳು, ಚರ್ಚೆಗಳು ನಡೆಯುತ್ತಿದ್ದವು. ಕೆಲವರು, ಸಾಯೋಕಿಂತ ಮೊದಲೇ `ಅವರ' ಆಸೆಗಳನ್ನು ಈಡೇರಿಸಿ ಎಂದು ಪಟ್ಟು ಹಿಡಿದಿರ್‍ತಿದ್ರು. ಮತ್ತೆ ಕೆಲವರು- ಪ್ರಶಸ್ತಿಯನ್ನೋ, ಮಂತ್ರಿ ಪದವಿಯನ್ನೋ ಪಡೆದು ಹೆಸರು ಕೆಡಿಸಿಕೊಳ್ಳುವ ಬದಲು, ನೆಮ್ಮದಿಯಾಗಿ ಸಾಯೋಕಾಗಲ್ವ ನಿಮ್ಗೆ ಎಂದು ಸ್ವಾಟಿ ತಿವಿಯುತ್ತಿದ್ದರು. ಈ ಮಧ್ಯೆಯೇ ಕೆಲವರು, ಸಾವನ್ನು ತಡೆಯುವಂಥ ಸಂಶೋಧನೆ ಮಾಡ್ರೀ ಎಂದು ವಿಜ್ಞಾನಿಗಳನ್ನು ಒತ್ತಾಯಿಸುತ್ತಿದ್ದರು. ಮಾಟ-ಮಂತ್ರ ನಂಬುವ ಜನರಂತೂ ಸಾವೆಂಬುದು ತಮ್ಮನ್ನು ಮುಟ್ಟದಂತೆ ತಮ್ಮ ಸುತ್ತಲೂ ಅಷ್ಟದಿಗ್ಬಂಧನ ಮಾಡಿಸಿಕೊಳ್ಳಲು ಮುಂದಾಗುತ್ತಿದ್ದರು. ಮುಖ್ಯವಾಗಿ, ಸಾವಿನ ಬಗ್ಗೆ ಮೊದಲೇ ತಿಳಿದಿದ್ದರೆ ಮನೆಮನೆಯೂ ಹುಚ್ಚಾಸ್ಪತ್ರೆಯಂತಾಗುತ್ತಿತ್ತು. ಪ್ರೀತಿಯೆಂಬುದು ತೋರಿಕೆಯಾಗುತ್ತಿತ್ತು. ನಂಬಿಕೆಯ ಹೆಸರಲ್ಲೇ ವಂಚನೆ ನಡೆಯುತ್ತಿತ್ತು. ಗಂಡನಾದವನು ತೀರಾ ಗುಟ್ಟು ಎಂಬಂತೆ ತನ್ನ ಸಂಕಟ ಹೇಳಿಕೊಂಡಿರುತ್ತಿದ್ದ. ಆದರೆ ಹೆಂಡತಿಯಾದವಳು ಅದನ್ನು ಹತ್ತು ಮಂದಿಗೆ ಹೇಳಿಬಿಟ್ಟಿರುತ್ತಿದ್ದಳು. ಪರಿಣಾಮ, ಯಾರೋ ಒಬ್ಬ ಇಂಥ ದಿನವೇ ಸಾಯ್ತಾನಂತೆ ಎಂಬ ಸುದ್ದಿ ಕೇಳಿ- ಸಾವಿಗೂ ಮೊದಲೇ ಸಂತಾಪ ಕೋರಲು ನೂರಾರು ಜನ ಬಂದಿರುತ್ತಿದ್ದರು. ಅವರನ್ನು ನೋಡಿದಾಕ್ಷಣವೇ- ಮನುಷ್ಯನಿಗೆ ಹುಚ್ಚು ಹಿಡಿದಿರುತ್ತಿತ್ತು!
* * *
ಇದನ್ನೆಲ್ಲ ಅಂದಾಜು ಮಾಡಿಕೊಂಡು ಯೋಚಿಸಿದರೆ- ಸಾವೆಂಬುದು ನಿರ್ದಯಿಯಾಗಿರುವುದೇ ಸರಿ ಅನಿಸುತ್ತದೆ. ಅದರ ಹೆದರಿಕೆಯಲ್ಲೇ ನಾವು ಚನ್ನಾಗಿದೀವಿ ಅನಿಸುತ್ತದೆ. ಸಾವೆಂಬ ಸರ್ವಾಧಿಕಾರಿಗೆ ಸಲಾಮು ಹೊಡೆಯುವ ಮನಸಾಗುತ್ತದೆ. ಈ ಜಗತ್ತಿನ ಅಷ್ಟೂ ಜೀವಿಗಳ ಬೆನ್ನ ಹಿಂದೆಯೇ ಇದೀಯಲ್ಲ- ಎಂಥ ಕಿಲಾಡಿ ಅಲ್ವಾ ನೀನು ಎಂದು ಛೇಡಿಸುವ ಆಸೆಯಾಗುತ್ತದೆ. ಒಂದು ವೇಳೆ `ಸಾವು' ಇಂಥ ದಿನವೇ ಬರುತ್ತೆ ಎಂದು ಮೊದಲೇ ಗೊತ್ತಿದ್ದಿದ್ದರೆ `ಸೂತಕ' ಎಂಬ ಪದಕ್ಕೆ ಅರ್ಥವೂ ಇರುತ್ತಿರಲಿಲ್ಲ. ಹೇಗೆ ಬದುಕಬೇಕು ಮತ್ತು ಹೇಗೆಲ್ಲ ಬದುಕಬಾರದು ಎಂಬ ಎಚ್ಚರಿಕೆಯ ಪಾಠ ಕೂಡ ಆಗುತ್ತಿರಲಿಲ್ಲ ಎನ್ನಿಸಿದಾಗ ವಿಸ್ಮಯವಾಗುತ್ತದೆ. ಮತ್ತು ಹೀಗೆಲ್ಲ ಯೋಚಿಸಿದ ನಂತರವೂ- ನಮಗೆ ಒಂದಷ್ಟು ಜಾಸ್ತಿ ಬದುಕುವ ಅವಕಾಶ ಕೊಡು ಎಂದು ಸಾವೆಂಬ ಸಾವನ್ನೇ ಬೊಗಸೆಯೊಡ್ಡಿ ಬೇಡುವ ದುರಾಸೆಯೂ ಜತೆಯಾಗುತ್ತದೆ, ಅಲ್ಲವೇ

Thursday, August 2, 2012

Children


ಮಕ್ಕಳ ವ್ಯಕ್ತಿತ್ವವನ್ನು ರೂಪಿಸುವುದರಲ್ಲಿ ಪೋಷಕರ ಮಾತ್ರ ಪ್ರಮುಖವಾದದು. ಉತ್ತಮ ಮಾರ್ಗದರ್ಶನದಲ್ಲಿ ನಡೆದ ಮಕ್ಕಳು ದಾರಿ ತಪ್ಪುವ ಸಾಧ್ಯತೆ ತುಂಬಾ ಕಡಿಮೆ. ಅದರಲ್ಲೂ ಮಕ್ಕಳಿಗೆ ಕೆಲವೊಂದು ನೀತಿ ನಿಯಮಗಳನ್ನು ಪೋಷಕರು ಹೇಳಿಕೊಡಬೇಕು. ಚಿಕ್ಕದಿರುವಾಗ ಮಕ್ಕಳು ಮಡುವ ತುಂಟಾಟಗಳನ್ನು ತಿದ್ದದೇ ಹೋದರೆ ಅಂತಹ ಮಕ್ಕಳು ದೊಡ್ಡದಾದ ಮೇಲೆ ಪೋಷಕರ ಮಾತು ಕೇಳುವುದಿಲ್ಲ. ದೊಡ್ಡದಾದ ಮೇಲೆ ತಾವು ಹೇಳಿದ್ದೇ ಸರಿ ನಡೆದಿದ್ದೇ ರೀತಿ ಎಂಬಂತೆ ವರ್ತಿಸುವಾಗ ಚಿಂತಿಸಿ ಫಲವಿಲ್ಲ. 

ಕೆಲವು ಪೋಷಕರು ತಮಗೇ ಒಂದೇ ಮಗು ಎಂದು ಆ ಮಗುವನ್ನು ವಿಪರೀತ ಮುದ್ದು ಮಾಡಿ ಸಾಕುತ್ತಾರೆ. ಮಗು ಏನೇ ಗಲಾಟೆ ಮಾಡಿದರೂ, ಹಠ ಮಾಡಿದರೂ ಎನೂ ಹೇಳುವುದಿಲ್ಲ. ಆದರೆ ಈ ರೀತಿ ಬೆಳೆಸಿದರೆ ಮುಂದೆ ಪಶ್ಚಾತಾಪ ಪಡಬೇಕಾಗುತ್ತದೆ.
ಎಲ್ಲಾ ಪೋಷಕರಿಗೆ ತಮ್ಮ ಮಕ್ಕಳು ಆದರ್ಶವಾಗಿ ಬೆಳೆಯಬೇಕೆಂಬ ಆಸೆ ಇರುತ್ತದೆ. ಆ ರೀತಿ ಬೆಳೆಯಲು ಮಕ್ಕಳಿಗೆ ಈ ಕೆಳಗಿನ ಜೀವನ ಪಾಠಗಳನ್ನು ಕಡ್ಡಾಯವಾಗಿ ಹೇಳಿಕೊಡಬೇಕು.

1.ಹಿರಿಯರನ್ನು ಗೌರವಿಸುವುದು:
 ಮಕ್ಕಳಿಗೆ ಗುರು ಹಿರಿಯರಿಗೆ ಗೌರವ ಕೊಟ್ಟು ನಡೆದುಕೊಳ್ಳುವುದನ್ನು ಕಲಿಸಬೇಕು. ಮಕ್ಕಳು ಈ ರೀತಿ ನಡೆದುಕೊಂಡರೆ ಜನರು ಪೋಷಕರನ್ನು ಹೊಗಳುತ್ತಾರೆ. ಇಲ್ಲದಿದ್ದರೆ ಮಕ್ಕಳು ಮಾಡುವ ತಪ್ಪುಗಳಿಗೆ ಈ ಸಮಾಜ ಪೋಷಕರನ್ನೇ ಹೊಣೆ ಮಾಡುತ್ತದೆ. 

2. ಪ್ರಾಮಾಣಿಕತೆ:
 ಪ್ರಾಮಾಣಿಕತೆಯಿಂದ ನಡೆದುಕೊಳ್ಳುವುದನ್ನು ತಿಳಿಸಿ. ನೀತಿ ತೆಗಳನ್ನು ಹೇಳಿ. ಈ ಪಾಠಗಳು ಮುಂದೆ ಆ ಮಕ್ಕಳನ್ನು ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸುತ್ತದೆ. 

3.ಸೋಲನ್ನು ಎದುರಿಸುವುದನ್ನು ಕಲಿಸಿ:
 ಇಲ್ಲಿ ತುಂಬಾ ಪೋಷಕರು ತಪ್ಪು ಮಾಡುತ್ತಾರೆ. ಮಕ್ಕಳ ಜಯವನ್ನು ಕಂಡು ಸಂತೋಷ ಪಟ್ಟು ಹುರಿದುಂಬಿಸಿ, ಸೋಲನ್ನು ಅನುಭವಿಸಿದಾಗ ಇತರ ಮಕ್ಕಳ ಜೊತೆ ಹೋಲಿಕೆ ಮಾಡಿ ಬೈಯ್ಯುವುದು, ಹೀಯಾಳಿಸುವುದು ಮಾಡುತ್ತಾರೆ. ಆದರೆ ಒಂದು ಪೋಷಕರು ಒಂದು ವಿಷಯವನ್ನು ತಿಳಿದುಕೊಳ್ಳಬೇಕು ಬೈಯ್ಯದ್ದರೆ, ಹೀಯಾಳಿಸದರೆ ಮಕ್ಕಳು ಮತ್ತೆ ಜಯಗಳಿಸಿ ಬರುತ್ತಾರೆ ಅನ್ನುವುದು ತಪ್ಪು ಕಲ್ಪನೆ. ಯಾವುದಾದರೂ ವಿಷಯದಲ್ಲಿ ಸೋತಾಗ ಮಾನಸಿಕ ಧೈರ್ಯ ನೀಡಿ, ಸೋಲೇ ಗೆಲುವಿಗೆ ಮೆಟ್ಟಲು ಎಂದು ಸಮಧಾನಿಸಿ. ಈ ರೀತಿ ಮಾಡಿದರೆ ಮಕ್ಕಳು ಬದುಕಿನಲ್ಲ ಬರುವ ಕಷ್ಟಗಳನ್ನು, ಸೋಲುಗಳನ್ನು ಎದುರಿಸುವ ಸಾಮರ್ಥ್ಯ ಬೆಳೆಸಿಕೊಳ್ಳುತ್ತಾರೆ.

4. ಕರುಣೆ:
 ಮಕ್ಕಳಿಗೆ ಇತರರು ಕಷ್ಟದಲ್ಲಿರುವಾಗ ಸಹಾಯ ಮಾಡಬೇಕೆಂಬ ಪಾಠ ಕಲಿಸಿ. ಸಹಾಯ ಮಾಡಲು ಆಗದಿದ್ದರೂ ಕಷ್ಟದಲ್ಲಿರುವವರನ್ನು ಮತ್ತಷ್ಟು ನೋಯಿಸುವ ಕೆಲಸ ಮಾಡಬಾರದು ಎಂಬ ಪಾಠ ಕಲಿಸಿಕೊಡಬೇಕು.

5. ಹೊಂದಾಣಿಕೆ:
 ಮಕ್ಕಳಿಗೆ ಇತರ ಮಕ್ಕಳ ಜೊತೆ ಹೊಂದಾಣಿಕೆಯಿಂದ ಇರುವುದನ್ನು ಕಲಿಸಿದರೆ, ಮಕ್ಕಳು ಬೆಳೆದಾಗ ಎಂತಹ ಪರಿಸ್ಥಿತಿಗೂ ಹೊಂದಿಕೊಂಡು ಹೋಗುವುದನ್ನು ಕಲಿಯುತ್ತಾರೆ.

6. ಶ್ರಮ:
 ಮಕ್ಕಳ ಎಲ್ಲಾ ಕೆಲಸವನ್ನು ಪೋಷಕರೇ ಮಾಡದೇ ಅವರ ಕೆಲಸವನ್ನು ಅವರೇ ಮಾಡುವುದನ್ನು ಕಲಿಸಬೇಕು. ಕಷ್ಟಪಟ್ಟು ಓದಿ ಅಂತ ಪ್ರೋತ್ಸಾಹಿಸಬೇಕು. ಸೋಮರಿಗಳಾಗಿದ್ದರೆ ನೋಡಿ ಸುಮ್ಮನೆ ಇರದೆ ತಿಳಿ ಹೇಳಬೇಕು.

7. ಸಾವರ್ಜನಿಕ ಸ್ಥಳಗಳಲ್ಲಿ ವರ್ತನೆ:
 ಇದನ್ನು ಮುಖ್ಯವಾಗಿ ಕಲಿಸಿರಬೇಕು. ಇಲ್ಲದಿದ್ದರೆ ಪೋಷಕರು ಅವಮಾನ ಎದುರಿಸಬೇಕಾಗುತ್ತದೆ. ಏಕೆಂದರೆ ಮಕ್ಕಳು ಸಮಾಜದಲ್ಲಿ ಹೇಗೆ ವರ್ತಿಸುತ್ತಾರೆ ಅನ್ನುವುದರ ಆಧಾರದ ಮೇಲೆ ದೊಡ್ಡವರಾದ ಮೇಲೆ ಸ್ಥಾನಮಾನ ದೊರೆಯುತ್ತದೆ

ಮಕ್ಕಳು ವಯಸ್ಸಿಗೆ ತಕ್ಕ ಬೆಳವಣಿಗೆಯನ್ನು ಹೊಂದಬೇಕು. ಇಲ್ಲದಿದ್ದರೆ ಬೆಳೆದರೂ ಕುಬ್ಜರಂತೆ ಕಾಣುವುದು. ಮಕ್ಕಳು ಆರೋಗ್ಯವಂತರಾಗಿ ಬೆಳೆಯಲು ಅಗತ್ಯವಾದ ಪೋಷಕಾಂಶಗಳನ್ನು ನೀಡಬೇಕು. ಸಹಜ ಬೆಳವಣಿಗೆ ಮತ್ತು ಅಭಿವೃದ್ಧಿಗೆ ವ್ಯತಿರಿಕ್ತವಾಗಿದ್ದರೆ ಅರೋಗ್ಯಕೇಂದ್ರದ ಸಹಾಯವನ್ನು ಪಡೆಯಬೇಕು.
ಮಕ್ಕಳ ಬೆಳವಣಿಗೆಯು ವಯೋಮಾನಕ್ಕೆ ಅನುಗುಣವಾಗಿ ವಿಭಿನ್ನವಾಗಿರುತ್ತದೆ. ಉಷ್ಣ ಪ್ರದೇಶದಲ್ಲಿ ಮಕ್ಕಳು ಬೇಗನೆ ಬೆಳವಣಿಗೆಯನ್ನು ಹೊಂದುತ್ತಾರೆ. ಮಕ್ಕಳ ಬೆಳವಣಿಗೆಯು ಹಲವಾರು ವಿಷಯಗಳಿಂದ ಪ್ರಭಾವಿತವಾಗಿವೆ.  ಸಾಮಾನ್ಯವಾಗಿ ಆರೋಗ್ಯವಂತ ಮಕ್ಕಳಲ್ಲಿ ಬೆಳವಣಿಗೆಯು ಜೀವನದ ಮೊದಲ ವರ್ಷದಲ್ಲಿಯೇ ಶೀಘ್ರವಾಗಿ ಆಗುತ್ತದೆ
ಬೆಳವಣಿಗೆಯ ಕ್ರಮ:
ಬಹುತೇಕ ಎಲ್ಲ ಮಕ್ಕಳು ಹುಟ್ಟಿದ 2-3 ದಿನಗಳಲ್ಲಿ ತೂಕ ಕಳೆದುಕೊಳ್ಳುತ್ತವೆ. 7 ರಿಂದ 10 ದಿನಗಳಲ್ಲಿ ಪುನಃ ತೂಕ ಗಳಿಸುತ್ತವೆ. ಅವುಮೊದಲ ಮೂರು ತಿಂಗಳ ತನಕ ಗಳಿಸುವ ತೂಕವು ದಿನಕ್ಕೆ 25-30ಗ್ರಾಂ ಆಗಿರುತ್ತದೆ. ಸಾಮಾನ್ಯವಾಗಿ ಮಗುವಿನ ತೂಕ 3 ತಿಂಗಳಲ್ಲಿ ಹುಟ್ಟಿದಾಗ ಇದ್ದ ತೂಕಕ್ಕಿತ ಎರಡು ಪಟ್ಟು ಮತ್ತು ಒಂದು ವರ್ಷದಲ್ಲಿ ಮೂರು ಪಟ್ಟು ಹೆಚ್ಚಾಗುವುದು. ಕೆಲವೊಂದು ಮಕ್ಕಳು ಹುಟ್ಟಿದಾಗಲೆ ಕಡಿಮೆ ತೂಕವಿದ್ದರೂ ಕೂಡ ಅಂತಹ ಮಕ್ಕಳಲ್ಲಿ ತೂಕ ಬೇಗನೆ ಎರಡುಪಟ್ಟಾಗುವುದು. ಒಂದು ವರ್ಷದಲ್ಲಿ ನಾಲ್ಕು ಪಟ್ಟಾಗುವುದು. ಒಂದು ವರ್ಷದ ನಂತರ ಬೆಳವಣಿಗೆಯ ವೇಗ ಕಡಿಮೆಯಾಗುವುದು.ಮಕ್ಕಳು ಹುಟ್ಟಿದಾಗ ತುಂಬಾ ಕಡಿಮೆ ತೂಕವಿದ್ದರೂ ನಂತರ ಪೌಷ್ಠಿಕ ಆಹಾರಗಳಿಂದ ತೂಕ ಹೆಚ್ಚಾಗುವುದು. ಆದರೆ ಮತ್ತೆ ಕೆಲವು ಮಕ್ಕಳಲ್ಲಿ ಈ ರೀತಿಯ ಬೆಳವಣಿಗೆ ಕಂಡುಬರುವುದಿಲ್ಲ. ಆ ರೀತಿಯಾದರೆ ಮಕ್ಕಳ ತಜ್ಞರನ್ನು ಕಂಡು ಸಲಹೆಗಳನ್ನು ಪಡೆದುಕೊಳ್ಳಬೇಕು.
ಮಕ್ಕಳ ತೂಕದ ಗ್ರಾಫ್ ಪ್ರಕಾರ ಅನೇಕ ಮಕ್ಕಳಲ್ಲಿ ಮೊದಲ 5-6 ತಿಂಗಳಲ್ಲಿ ಬೆಳವಣಿಗೆ ಸರಿಯಾದ ರೀತಿಯಲ್ಲಿಯಾಗುವುದು. ತೂಕ ಆ ಅವಧಿಯಲ್ಲಿ ದ್ವಿಗುಣವಾಗುವುದು. ನಂತರ ಬೆಳವಣಿಗೆ ಕುಂಠಿತವಾಗುತ್ತದೆ. ಇದಕ್ಕೆ ಕಾರಣ ಮಗುವಿಗೆ ಎದೆ ಹಾಲು ಸಾಕಾಗುವುದಿಲ್ಲ. ಅದರ ಜತೆ ಹೆಚ್ಚುವರಿ ಆಹಾರವನ್ನು ಈಗಾಗಲೇ ಚರ್ಚಿಸಿದಂತೆ ನೀಡಬೇಕಾಗುವುದು.

ಮಗುವಿನ ತೂಕವು ಅದರ ಎತ್ತರವನ್ನು ಅವಲಂಬಿಸಿದೆ. ಮಗುವಿನ ತೂಕವು ಸಹಜವಾಗಿ ಇದೆಯೋ ಇಲ್ಲವೇ ಎಂಬುದನ್ನು ಅರಿಯುವುದು ಅತಿ ಅಗತ್ಯ. ಅದರ ಎತ್ತರದ ಪ್ರಕಾರ ಮಗುವು ಹೆಚ್ಚು ತೂಕದ್ದಾಗಿರಬಹುದು ಇಲ್ಲವೇ ಕಡಿಮೆ ತೂಕದ್ದಾಗಿರಬಹುದು. ಅತಿ ಕಡಿಮೆ ತೂಕ ಹೊಂದಿದ್ದರೆ ಅದು ಪೌಷ್ಟಿಕ ಆಹಾರಗನ್ನು ಕೊಡಬೇಕು.
ಎತ್ತರವು ಮಗುವಿನ ಬೆಳವಣಿಗೆಯನ್ನು ಅರಿಯುವ ಒಂದು ಅಂಶವಾಗಿದೆ. ನವಜಾತ ಶಿಶುವಿನ ಎತ್ತರವು 20 ಇಂಚು ಇರುತ್ತದೆ. ನಂತರ ಮೊದಲ ವರ್ಷದಲ್ಲಿ ಅದಕ್ಕಿಂತ 25ಸೆ.ಮೀ, ಎರಡನೆ ವರ್ಷದಲ್ಲಿ 12 ಸೆ.ಮೀ ಬೆಳೆಯುವುದು.3ನೇ, 4ನೇ,ಮತ್ತು 5ನೇ ವರ್ಷದಲ್ಲಿ ಕ್ರಮವಾಗಿ 9 ಸೆಂ.ಮಿ, 7ಸೆಂ.ಮೀ ಮತ್ತು 6 ಸೆಂ.ಮೀ.ಬೆಳೆಯಬೇಕು. ಎತ್ತರವು ವಯಸ್ಸಿಗೆ ಅನುಗುಣವಾಗಿಲ್ಲದಿದ್ದರೆ ಅದನ್ನು ಕುಂಠಿತ ಬೆಳವಣಿಗೆ ಅಥವಾ ಕುಬ್ಜ ಬೆಳವಣಿಗೆ ಎಂದು ಅರ್ಥ.
ಮಗುವಿನ ಅಭಿವೃದ್ಧಿಯು ಬೌದ್ಧಿಕ, ಭಾವನಾತ್ಮಕ,ಮತ್ತು ಸಾಮಾಜಿಕ ಕೌಶಲ್ಯಗಳು ಮತ್ತು ಕಾರ್ಯಗಳಿಗೆ ಸಂಬಂಧಿಸಿದ ಅಭಿವೃದ್ಧಿಯನ್ನು ಸೂಚಿಸುತ್ತದೆ. ಅದು ಮಾನಸಿಕ, ವರ್ತನೆಯ ಆಭಿವೃದ್ಧಿಯನ್ನು ಸೂಚಿಸುವುದು. ಅದ್ದರಿಂದ ಮಗುವಿನ ಬೆಳವಣಿಗೆಯ ಗಮನಿಸಬೇಕು. ತಾಯಂದಿರು ಮತ್ತು ಕುಟುಂಬದ ಸದಸ್ಯರು ಮಕ್ಕಳ ಬೆಳವಣಿಗೆ ಮತ್ತು ಅಭಿವೃದ್ಧಿಯ ಬಗ್ಗೆ ತಿಳೀದಿರುವುದು ಒಳ್ಳೆಯದು.
ವಂಶಪಾರಂಪರ್ಯ, ಪೌಷ್ಟಿಕತೆ, ಬಾಹ್ಯ ಪರಿಸರ, ಆರೋಗ್ಯ ಇವೆಲ್ಲಾ ಮಕ್ಕಳ ಆರೋಗ್ಯದ ಮೇಲೆ ಪ್ರಭಾವ ಬೀಳುತ್ತದೆ. ಆದ್ದರಿಂದ ಮಗುವಿನ ಬೆಳವಣಿಗೆ ಸರಿಯಾಗಿ ಇರದಿದ್ದರೆ ಕೂಡಲೇ ವೈದ್ಯರನ್ನು ಕಂಡು ಅದಕ್ಕೆ ಕಾರಣವನ್ನು ಕಂಡು ಪರಿಹಾರವನ್ನು ಕಂಡುಕೊಳ್ಳಬೇ

ಮಕ್ಕಳಿಗೆ ಈ ಮಾತುಗಳನ್ನು ತಪ್ಪಿಯೂ ಹೇಳಬೇಡಿ

ಪೋಷಕರು ಮಕ್ಕಳಲ್ಲಿ ಮಾತನಾಡುವಾಗ ಆಲೋಚಿಸಿ ಮಾತನಾಡಬೇಕು. ಮಕ್ಕಳ ಮನಸ್ಸು ಸೂಕ್ಷ್ಮವಾಗಿದ್ದು , ನಿಮ್ಮ ಮಾತುಗಳಗಳು ತುಂಬಾ ಹರಿತವಾಗಿದ್ದರೆ ಆ ಸೂಕ್ಷ್ಮ ಮನಸ್ಸಿಗೆ ತುಂಬಾ ನೋವಾಗುತ್ತದೆ. ಮಕ್ಕಳು ಮಾಡುವ ತಪ್ಪುಗಳನ್ನು ತಾಳ್ಮೆಯಿಂದ ತಿಳಿ ಹೇಳಬೇಕು, ಬೈಯ್ದು ಹೇಳುವುದಕ್ಕಿಂತ, ಪ್ರೀತಿಯಿಂದ ಹೇಳಿದರೆ ಮಕ್ಕಳು ತಿದ್ದಿಕೊಳ್ಳುವುದು ಜಾಸ್ತಿ.
ಮಕ್ಕಳ ಮತ್ತು ನಿಮ್ಮ ಸಂಬಂಧ ಸುಂದರವಾಗಿರಬೇಕೆಂದರೆ ಮಕ್ಕಳ ಜೊತೆ ಹೇಗೆ ಮಾತನಾಡಬೇಕು, ಹೇಗೆ ವರ್ತಿಸಬೇಕು ಎಂದು ತಿಳಿದಿರಬೇಕು. ನಿಮಗೆ ಮಕ್ಕಳನ್ನು ಕಂಡರೆ ಆಗುವುದಿಲ್ಲ ಎಂಬ ಭಾವನೆ ಮಕ್ಕಳಲ್ಲಿ ಮೊಳಕೆಯೊಡೆಯಲು ಬಿಡಬಾರದು. ಸುಮ್ಮನೆ ಯಾವಾಗಲು ಬೈಯುವುದು, ಹೊಡೆಯುವುದು ಮಾಡುತ್ತಿದ್ದರೆ ಇವರು ಯಾವಾಗಲೂ ಹೀಗೆನೆ ನನ್ನ ಕಂಡರೆ ಆಗುವುದಿಲ್ಲ ಎಂಬ ತಪ್ಪು ಕಲ್ಪನೆಯನ್ನು ಬೆಳೆಸಿಕೊಂಡು ಬಿಡುತ್ತಾರೆ. ಅಲ್ಲದೆ ಮುಂದೆ ಮಕ್ಕಳು ತಪ್ಪು ಮಾಡಿದಾಗ ತಿಳಿ ಹೇಳಲು ಪ್ರಯತ್ನಿಸಿದರೂ ಕೇರ್ ಮಾಡುವುದಿಲ್ಲ. ಅದರಲ್ಲೂ ಮಕ್ಕಳೊಂದಿಗೆ ಈ ಕೆಳಗಿನಂತೆ ಯಾವತ್ತೂ ಹೇಳಬೇಡಿ.
1. ನನಗೆ ನಿಮ್ಮ ಮಾತು ಕೇಳಲು ಪುರುಸೊತ್ತು ಇಲ್ಲ: ನಿಮಗೆ ತುಂಬಾ ಕೆಲಸದ ಒತ್ತಡವಿರುತ್ತದೆ ನಿಜ. ಆದರೆ ನಿಮ್ಮ ಮಕ್ಕಳಿಗೆ ಅದು ಗೊತ್ತಿರುವುದಿಲ್ಲ. ಅವುಗಳು ಶಾಲೆಯಲ್ಲಿ ನಡೆದ ಪ್ರತಿಯೊಂದು ವಿಷಯವನ್ನು ನಿಮಗೆ ಹೇಳಲು ಇಷ್ಟಪಡುತ್ತಾರೆ. ಆಗ ನನಗೆ ಪುರುಸೊತ್ತು ಇಲ್ಲ, ನೀ ಸುಮ್ಮನೆ ಹೋಗು ಅಂತ ಮಾತ್ರ ಹೇಳಬೇಡಿ, ಆ ರೀತಿ ಮಾಡಿದರೆ ಮಗುವಿನ ಮನಸ್ಸಿಗೆ ತುಂಬಾ ನೋವಾಗುತ್ತದೆ, ಮುಂದೆ ಮಕ್ಕಳು ಏನನ್ನೂ ನಿಮಗೆ ಹೇಳಲು ಇಷ್ಟಪಡುವುದಿಲ್ಲ. ಆ ರೀತಿಯಾದರೆ ಮಕ್ಕಳು ಏನು ಮಾಡುತ್ತಿದ್ದರೆ ಎಂದು ತಿಳಿಯುವುದಿಲ್ಲ, ಕೆಲವೊಮ್ಮೆ ಕೆಟ್ಟ ಹಾದಿಯನ್ನು ಕೂಡ ತುಳಿಯಬಹುದು. ಆದ್ದರಿಂದ ಮಕ್ಕಳು ಹೇಳುವುದನ್ನು ಕೇಳಿ, ಆಗ ಮಕ್ಕಳಿಗೆ ನಿಮ್ಮಲ್ಲಿ ಆತ್ಮೀಯತೆ ಹೆಚ್ಚಾಗುವುದು.
2. ವಯಸ್ಸಿಗೆ ತಕ್ಕ ರೀತಿ ಇರು: ಮಕ್ಕಳು ಪೋಷಕರ ಹತ್ತಿರ ಬಾಲಿಷವಾಗಿಯೇ ಆಡುತ್ತಾರೆ. 10 ವರ್ಷದ ಮಗಳು 5 ವರ್ಷದ ಹುಡುಗಿ ತರ ಆಡುತ್ತಿದ್ದರೆ ನಿನ್ನ ವಯಸ್ಸುಗೆ ತಕ್ಕ ಹಾಗೆ ಇರಲು ಕಲಿ ಅತ ಬೈಯುವುದು ಸರಿಯಲ್ಲ. ಮಕ್ಕಳು ಏನಾದರೂ ಮಾಡಿ, ಅದು ನಿಮಗೆ ತುಂಬಾ ಕಿರಿಕಿರಿಯನ್ನು ಉಂಟು ಮಾಡಿದ್ದರೂ ಆ ಕ್ಷಣ ಪ್ರತಿಕ್ರಿಯೆಸಲು ಹೋಗಬೇಡಿ. ನಂತರ ನಿಧಾನಕ್ಕೆ ಹೇಳಿ ನೀನು ಮಾಡುವುದು ಸರಿಯಿಲ್ಲ ಅಂತ ಅವು ತಿದ್ದಿ ಕೊಳ್ಳುತ್ತವೆ.
3. ನಿನಗೇನು ಅರ್ಥವಾಗಲ್ವಾ?: ಮಕ್ಕಳಿಗೆ ಏನಾದರೂ ಪಾಠ ಹೇಳಿ ಕೊಡುವಾಗ ತುಂಬಾ ಸಲ ಹೇಳಿ ಕೊಟ್ಟರೂ ಪುನಃ ತಪ್ಪು ಮಾಡುವಾಗ ನಿನಗೇನು ಅರ್ಥವಾಗಲ್ವಾ? ಅಂತ ಕೇಳ ಬೇಡಿ. ಮಕ್ಕಳಿಗೂ ತಂದೆ, ತಾಯಿ ಹತ್ತಿರ ಭೇಷ್ ಅನ್ನಿಸಿಕೊಳ್ಳಬೇಕೆಂಬ ಆಸೆ ಇರುತ್ತದೆ. ಮಕ್ಕಳಿಗೆ ಮತ್ತೊಮ್ಮೆ ಟ್ರೈ ಮಾಡು ಅಂತ ಹೇಳಬೇಕೆ ಹೊರತು ಇನ್ನೂ ಅರ್ಥವಾಗಿಲ್ವಾ? ಅಂತ ಕೇಳಬೇಡಿ.
4. ನಿನ್ನ ಬಿಟ್ಟು ಹೋಗುತ್ತೇನೆ: ಮಕ್ಕಳಿಗೆ ಈ ಮಾತು ಯಾವತ್ತಿಗೂ ಹೇಳಬೇಡಿ. ನಿಮ್ಮ ಬಿಟ್ಟು ಹೋಗಿ ಬಿಡುತ್ತೇನೆ, ನೀನು ನನಗೆ ಬೇಡ ಎಂದು ಹೇಳಿದರೆ ಮಕ್ಕಳು ಮಾನಸಿಕವಾಗಿ ಕುಗ್ಗಲಾರಂಭಿಸುತ್ತಾರೆ. ಮಕ್ಕಳು ಹೋಂ ವರ್ಕ್ ಮಾಡದಿದ್ದಾಗ ಅಥವಾ ಮಾರ್ಕ್ಸ್ ತುಂಬಾ ತೆಗೆಯದಿದ್ದಾಗ ಕೆಲ ಪೋಷಕರು ಈ ರೀತಿ ಮಕ್ಕಳನ್ನು ಭಯಪಡಿಸುತ್ತಾರೆ. ಆದರೆ ಆ ರೀತಿ ಮಾಡುವುದು ತುಂಬ ತಪ್ಪು. ಮಕ್ಕಳೊಂದಿಗೆ ಆತ್ನೀಯವಾಗಿ ವರ್ತಿಸಿ ಆಗ ಅವರು ನೀವು ಹೇಳಿದಂತೆ ಕೇಳುವುದು.